ಮಾರಿಸ್, ವಿಲಿಯಮ್
1834-96 ಇಂಗ್ಲೀಷ್ ಕವಿ ಹಾಗೂ ಕಲಾವಿದ ಹುಟ್ಟಿದ್ದು ವಾಲ್ಥಮ್‍ಸ್ಟೋವ್‍ನಲ್ಲಿ ತಂದೆ ವಿಲಿಯಮ್ ತಾಯಿ ಎಮ್ಮೊಷೆಲ್ಟನ್ 1829ರಲ್ಲಿ ಲಂಡನ್ನಿಗೆ ಬಂದು ನೆಲೆಸಿದ ಹಿರಿಯ ವಿಲಿಯಮ್ ಮೊದಲು ದಲ್ಲಾಳಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿ ಪಾಲುದಾರನಾದ.

ಮ್ಯಾರಿಸ್ ವಿಲಿಯಮ್‍ನ ದೇಹ ಪೃಕೃತಿ ಬಹಳ ನಾಜೂಕಾಗಿತ್ತು, ಚಿಕ್ಕಂದಿನಲ್ಲಿ ಆರೋಗ್ಯವಾಗಿರುತ್ತಿದ್ದುದೇ ವಿರಳ, ಓದುವುದರಲ್ಲಿ ತುಂಬಾ ಆಸಕ್ತಿ, ಕಲೆಗಳಲ್ಲಿಯೂ ಆಸಕ್ತಿ ವಾಸ್ತುಶಿಲ್ಪ ಚಿತ್ರಕಲೆ ಎರಡನ್ನೂ ಅಭ್ಯಾಸಮಾಡಿ, ಗೃಹಶೃಂಗಾರದ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ. 

1858ರಲ್ಲಿ ಪ್ರಕಟವಾದ ದಿ ಡಿಫೆನ್ಸ್ ಆಫ್ ಗಿನಿವರ್ ಮೊದ ಮೊದಲು ವಿಮರ್ಶಕರ ಗಮನ ಸೆಳೆಯದಿದ್ದರೂ ಮುಂದೆ ಅದೊಂದು ವಿಕ್ಟೋರಿಯಾ ಕಾಲದ ಮುತ್ತಿನಂಥ ಕೃತಿ ಎಂಬ ಮನ್ನಣೆ ಪಡೆಯಿತು. 
1859ರಲ್ಲಿ ರೂಪದರ್ಶಿ, ಆಕ್ಸ್‍ಫರ್ಡಿನ ಚೆಲುವೆ ಜೇನ್‍ಬರ್ಡನಳೊಂದಿಗೆ ಮದುವೆಯಾಯಿತು. ಬಿಡುವಿಲ್ಲದ ಕೆಲಸದ ನಡುವೆಯೂ, ಕಾವ್ಯ ರಚನೆ ಸಾಗಿತ್ತು, 1867ರಲ್ಲಿ ಲೈಫ್ ಅಂಡ್ ಡೆತ್ ಆಫ್ ಜೇಸನ್ ಪ್ರಕಟವಾಗಿ ಮೆಚ್ಚುಗೆ ಗಳಿಸಿತು. 1869ರಲ್ಲಿ ದಿ ಅರ್ತ್‍ಲಿ ಪ್ಯಾರಡೈಸ್ ಎರಡು ಭಾಗಗಳಲ್ಲಿ ಬಂದಿತು. ಇದರ ಮುಂದಿನ ಎರಡು ಭಾಗಗಳು 1869-70ರಲ್ಲಿ ವಂಡರ್ ಫುಲ್ ಸ್ಟೋರ್ ಹೌಸ್ ಪೊಯೆಟ್ ರೋಮಾನ್ಸ್ ಎಂಬ ಶಿರೋನಾಮೆಯಲ್ಲಿ ಪ್ರಕಟವಾದವು. 1872ರಲ್ಲಿ ಲವ್ ಈಸ್ ಎನಫ್ ಒಂದು ಸವಿಸ್ತಾರ ಕಾವ್ಯ, 1875ರಲ್ಲಿ ಕಂಪನಿ ಮುಚ್ಚಿತು. ಮಾರಿಸ್ ಸ್ವಂತ ವ್ಯಾಪಾರ ಆರಂಭಿಸಿದ, ಅದೇ ವರ್ಷ ಇನಿಯಡ್ ಮಹಾಕಾವ್ಯದ ಅನುವಾದ ಪ್ರಕಟವಾಯಿತು. 1876ರಲ್ಲಿ ಸಿಗರ್ಡ್ ದಿ ವೊಲ್‍ಸುಂಗ್ ಎಂಬ (ಐಸ್ಲ್ಯಾಂಡಿನ ವೀರಗಾಥೆಯ ಮಾದರಿಯಲ್ಲಿ) ಕಾವ್ಯವನ್ನು ರಚಿಸಿದ, ಇದೊಂದು ವೀರ್ಯವತ್ತಾದ ಕೃತಿ, ಆದರೆ ಬ್ರಿಟಿಷ್ ಮನೋಧರ್ಮಕ್ಕೆ ಒಗ್ಗದಷ್ಟು ದೀರ್ಘವಾಗಿದ್ದರಿಂದ ಜನಪ್ರಿಯವಾಗಲಿಲ್ಲ. 1877ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ಆಹ್ವಾನ ಬಂದಿತು. ಅದನ್ನು ನಿರಾಕರಿಸಿದ, ಪ್ರಾಚೀನ ಕಟ್ಟಡಗಳ ರಕ್ಷಣೆಗಾಗಿ ಒಂದು ಸಂಸ್ಥೆಯನ್ನು ವಿಲಿಯಮ್ ಸ್ಥಾಪಿಸಿದ,

ರಾಜಕೀಯ ಚಟುವಟಿಕೆಗಳಲ್ಲೂ ಭಾಗವಹಿಸಿ ಲಿಬರಲ್ ಪಕ್ಷದ ಉಗ್ರಪಂಥಿಯಾದ, 1883ರಲ್ಲಿ ಡೆಮೊಕ್ರಟಿಕ್ ಫೆಡರೇಷನ್ ಪಕ್ಷವನ್ನು ಸೇರಿ ಕೋಶಾಧಿಕಾರಿಯಾದ, ಮರುವರ್ಷ ತಾನೇ ಸೋಷಿಯಲಿಸ್ಟ್ ಲೀಗ್‍ನ್ನು ಕಟ್ಟಿ ಅದರ ಕೋಶಾಧಿಕಾರಿಯಾದ, ಕಾಮನ್‍ವೀಲ್ ಎಂಬ ಪತ್ರಿಕೆಯ ಸಂಪಾದಕನಾದ, ಅದರಲ್ಲಿ ಪ್ರಕಟವಾದ ಲೇಖನ ಮಾಲೆಯೇ ಮುಂದೆ ನ್ಯೂಸ್ ಫ್ರಮ್ ನೋವ್ಹೇರ್ ಎಂಬ ಪುಸ್ತಕ ರೂಪದಲ್ಲಿ ಬಂದಿತು. 1891ರಲ್ಲಿ ಪ್ರಕಟವಾದ ದಿ ಲೈಟ್ ಫುಲ್ ಅಂಡ್ ಇನ್‍ಸ್ಪೈರಿಂಗ್ ಸಮಾಜವಾದ ಸಾಹಿತ್ಯದಲ್ಲಿ ಒಂದು ಮಹೋನ್ನತ ಕೃತಿ, 1896ರಲ್ಲಿ ಮಾರಿಸ್ ತೀರಿಕೊಂಡ. 

ಮಾರಿಸ್ ವಿಕ್ಟೋರಿಯಾ ಕಾಲದ ಅಲಂಕಾರ, ನಕ್ಷೆಗಳ ಕಲೆಯ ಮೇಲೆ ಗಾತಿಕ್ ಮುದ್ರೆಯನ್ನು ಪುನಃ ಒತ್ತಿದ. ಗೃಹಾಲಂಕರಣದಲ್ಲಿ ಈತನ ಸ್ವೋಪಜ್ಞತೆ, ಸುವ್ಯಕ್ತ, ಈತನದು ಗೇಯಗುಣವುಳ್ಳ, ವರ್ಣ ರಂಜಿತ ಕಾವ್ಯ, ಸಾಹಸ, ವೀರರಸ, ಪ್ರಧಾನ ಕಥನ ಕಾವ್ಯಗಳಲ್ಲಿ ಮಧ್ಯಯುಗದ ವಾತಾವರಣವೇ ಪಡಿಮೂಡುತ್ತದೆ. ಸಮಕಾಲೀನ ಕಲಾವಿದರ ಮೇಲೆ ಹಾಗೂ ಅನಂತರದ ಪೀಳಿಗೆಯವರ ಮೇಲೆ ಈತನ ಪ್ರಭಾವ ಅಪಾರವಾದುದು. ಮೃಗೀಯ ಸ್ವಭಾವದ ದುಷ್ಟ ಅಭಿವ್ಯಕ್ತಿಗಳ ವಿರುದ್ಧ ಕೈಗಾರಿಕೀಕರಣದ ವಿರುದ್ಧ ಪ್ರತಿಭಟನೆ ಮಾಡುತ್ತ ಶ್ರೇಷ್ಠ ಅಭಿರುಚಿಯ ಸುಸಂಸ್ಕøತ ಸಮಾಜ ನಿರ್ಮಾಣ ಮಾಡಲು ಶ್ರಮಿಸುವ ಈತನ ಸಮಾಜವಾದ ವಿಶಿಷ್ಟವಾದುದು. ಕಲಾಕೃತಿಗಳೇ ಒಂದು ಸಮಾಜ, ಸಂಸ್ಕøತಿಯ ಶ್ರೇಷ್ಠ, ಮಾನದಂಡ ಎಂಬುದು ಈತನ ಅಭಿಮತ, ಇಂದಿನ ಇಂಗ್ಲೆಂಡಿನ ನಾಗರಿಕರ ಮನೆಗಳ ಅಲಂಕರಣ ಮಾದರಿ ವಿಲಿಯಮ್ ಮಾರಿಸ್ ಜನಪ್ರಿಯಗೊಳಿಸಿದ ಕಲಾ ನಕ್ಷೆಗಳಿಂದಲೇ ಕೂಡಿದೆ.			
					(ಕೆ.ಬಿ.ಪಿ)

1848ರಲ್ಲಿ ಡಿ.ಜಿ.ರಾಸೆಟ್, ಚಿತ್ರಕಲೆಯಲ್ಲಿ `ಪ್ರಿಶ್ಯಾಫಿಯಲೈಟ್ ಸೋದರ ಬಳಗವನ್ನು ಸ್ಥಾಪಿಸಿದ, ಮಾರಿಸ್ ಈ ಗುಂಪಿಗೆ ಸೇರಿದವನು. ಕಾವ್ಯಕ್ಕೆ ಈ ಬಳಗದ ಕವಿಗಳು ವಿವರಸಮೃದ್ಧತೆಯನ್ನು ಸಂದರು. `ಸೌಂದರ್ಯಕ್ಕಾಗಿ ಸೌಂದರ್ಯ ಎನ್ನುವುದು ಮಾರಿಸನ ವಿಚಾರರೀತಿ. ಇವನ ಕಾವ್ಯಗಳಲ್ಲಿ ವಿವರಸಮೃದ್ಧಿ ಇದೆ. ಇವು ಚಿತ್ರಕಲಾವಿದನ ಕವನಗಳು; ಸಂಗೀತದ ಅಂಶ ಸಾಕಷ್ಟು ಪ್ರಧಾನವಾಗಿದೆ.
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ